ಕೊರೋನಾ ಜಾಗೃತಿ ಕುರಿತು ಸ್ವಯಂ ಸೇವಕರಿಗೆ ತರಬೇತಿ

ಸ್ವಯಂ ಸೇವಕರು ನಮ್ಮ ಹುರುಪು ಹೆಚ್ಚಿಸಿದ್ದಾರೆ : ಜಿಲ್ಲಾಧಿಕಾರಿ
ದಾವಣಗೆರೆ ಏ.08-ಕೊರೋನಾ ನಿಯಂತ್ರಣದಲ್ಲಿ ಎಲ್ಲರ ಸತತ ಪ್ರಯತ್ನದಿಂದ ಜಿಲ್ಲೆಯ 3 ಕೊರೋನಾ ಪಾಸಿಟಿವ್ ಪ್ರಕರಣಗಳು ನೆಗೆಟಿವ್ ಬಂದಿದ್ದು ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಎದುರಿಸಲು ನಾವು ಹೇಗೆ ಸಜ್ಜಾಗಬೇಕು ಎಂದು ಚಿಂತಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೋವಿಡ್-19 ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳು 24*7 ನಂತೆ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ನಮ್ಮೊಂದಿಗೆ ಕೈ ಜೋಡಿಸಲು ಸ್ವಯಂ ಸೇವಕರು ಮುಂದೆ ಬಂದಿರುವುದು ಅತ್ಯಂತ ಸ್ವಾಗತಾರ್ಹ ಹಾಗೂ ಜಿಲ್ಲಾಡಳಿತ ನಿಮ್ಮ ಸೇವೆಯನ್ನು ಸಾರ್ಥಕವಾಗಿ ಬಳಸಿಕೊಳ್ಳುತ್ತದೆ ಎಂದರು. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯ ಸ್ಥಿತಿ ಉತ್ತಮವಾಗಿದ್ದು ಈ ಸಮಯದಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಬಂದವರು 19 ಸಾವಿರ ಜನರ ನಿಗಾ ವಹಿಸುವ ಹೊಣೆ ನಮ್ಮ ಮೇಲಿದೆ. ಅವರಲ್ಲಿ ಕೆಲವರು ಹೋಂ ಕ್ವಾರಂಟೈನ್‍ನಲ್ಲಿದ್ದಾರೆ. ಜಿಲ್ಲೆಯಲ್ಲಿದ್ದ ಮೂರು ಪಾಸಿಟಿವ್ ಪ್ರಕರಣಗಳ ಸೋಂಕಿತರು ಗುಣಮುಖ ಹೊಂದಿದ್ದು ಅವರ ಪರೀಕ್ಷೆ ವರದಿ ನೆಗೆಟಿವ್ ಎಂದು ಬಂದಿದೆ. ಐಸೋಲೆಷನ್‍ನಲ್ಲಿ ವಾರ್ಡ್‍ನಲ್ಲಿದ್ದ ಇಬ್ಬರು ಬಿಡುಗಡೆಯಾಗಿದ್ದಾರೆ. ಇನ್ನೊಬ್ಬ ಸೋಂಕಿತರ ಬಿಡುಗಡೆ ಬಗ್ಗೆ ಇಂದು ತೀರ್ಮಾನಿಸಲಾಗುವುದು ಎಂದರು.
ಈ ಹಿನ್ನೆಲೆಯಲ್ಲಿ ಸೇವಾ ಮನೋಭಾವದಿಂದ ಯಾವುದನ್ನೂ ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿರುವ ತಮ್ಮನ್ನು ಅಭಿನಂದಿಸುತ್ತೇನೆ ಎಂದರು.

ರೈತರ ಗಮನಕ್ಕೆ : ಜಿಲ್ಲೆಯಲ್ಲಿ ಭತ್ತ ಕಟಾವಿಗೆ ಬಂದಿದ್ದು, ಭತ್ತ ಬೆಳೆದ ರೈತರಿಗೆ ಭತ್ತ ಕೊಯ್ಯುವ ಯಂತ್ರ ಅವಶ್ಯವಿದ್ದಲ್ಲಿ ಸಂಬಧಿಸಿದ ರೈತರು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್ ಅವರಿಗೆ ಅರ್ಜಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ರವೀಂದ್ರ ಮಲ್ಲಾಪುರ ಮಾತನಾಡಿ, ನಿವಾಗಿಯೇ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಮುಂದೆ ಬಂದಿರುವುದು ಸಂತಸ. ನಿಮ್ಮೇಲ್ಲರಿಗೂ ಜಿಲ್ಲಾಡಳಿತದಿಂದ ಅಂಭಿನಂದನೆಗಳನ್ನು ಸಲ್ಲಿಸುತ್ತೇನೆ. ಸ್ವಯಂ ಸೇವಕರಿಗೆ ಈವರೆಗೂ ಜಿಲ್ಲಾಡಳಿತದಿಂದ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಸೂಚಿಸಿಲ್ಲ. ಅಗತ್ಯವೆನಿಸಿದಲ್ಲಿ ತಮಗೆ ಕೆಸಲವನ್ನು ಹಂಚಿಕೆ ಮಾಡಿ ನಿರ್ವಹಿಸಲು ಬಳಸಿಕೊಳ್ಳಲಾಗುವುದು. ಅಲ್ಲಿಯವರೆಗೆ ತಾವು ತಮ್ಮ ಮನೆಯ ವ್ಯಾಪ್ತಿಯಲ್ಲಿಯೇ ತರಕಾರಿ, ಹಣ್ಣು, ಪಡಿತರ ವಿತರಿಸುವ ಸ್ಥಳಗಳಿಗೆ ತೆರಳಿ ಸಾರ್ವಜನಿಕರಿಂದ ಆಗುವ ನೂಕು ನುಗ್ಗಲನ್ನು ತಡೆದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸಬೇಕು. ಹಾಗೂ ಕರೋನಾ ವೈರಾಣು ಹರಡುವಿಕೆಯನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ತಿಳಿಸಬೇಕು ಎಂದರು. ದಾನಿಗಳು ಆಹಾರ ಧಾನ್ಯ ಮತ್ತು ಬಟ್ಟೆ ದಿನಸಿಗಳನ್ನು ನಿರ್ಗತಿಕರಿಗೆ ಹಂಚಲು ಬಯಸಿದಲ್ಲಿ ಜಿಲ್ಲಾಡಳಿತದಲ್ಲಿ ಆರಂಬಿಸಲಾದ ಕೊರೋನಾ ವಾರ್ ರುಮ್‍ಗೆ ತಲುಪಿಸಬೇಕು. ಅಲ್ಲಿಂದ ಅವುಗಳನ್ನು ಅಗತ್ಯವಿರುವವರಿಗೆ ವಿತರಿಸಲಾಗುತ್ತಿದೆ. ಇದಕ್ಕಾಗಿ ಕಾರ್ಮಿಕ ಅಧಿಕಾರಿಗಳು ಹಾಗೂ ದುಡಾ ಆಯುಕ್ತರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದರು. ಸ್ವಯಂ ಸೇವಕರು ಅಗತ್ಯವಿದ್ದಲ್ಲಿ ಪೊಲೀಸರೊಂದಿಗೆ ಜೊತೆಗೂಡಿಸಿ ಗುಂಪು ಗುಂಪಾಗಿ ರಸ್ತೆಗಿಳಿಯುವವರನ್ನು ನಿಯಂತ್ರಣ ಮಾಡುವುದರೊಂದಿಗೆ ಅರಿವು ಮೂಡಿಸಬೇಕು ಎಂದರು. ಡಿಎಚ್‍ಓ ಡಾ. ರಾಘವೇಂದ್ರಸ್ವಾಮಿ ಮಾತನಾಡಿ, ಸಾರ್ವಜನಿಕರೆಲ್ಲರೂ ಸಹ ಮಾಸ್ಕ್ ಹಾಕಿಕೊಳ್ಳುವ ಅಗತ್ಯವಿಲ್ಲ. ಜನರೊಂದಿಗೆ ವ್ಯವಹರಿಸುವಾಗ ಹಾಗೂ ಸೋಂಕಿತ ಮತ್ತು ಶಂಕಿತ ವ್ಯಕ್ತಿಗಳ ಹತ್ತಿರವಿರುವಾಗ ಮಾತ್ರ ಮಾಸ್ಕ್ ಬಳಸುವಂತೆ ತಿಳಿಸಿದರು. ಎನ್ 95 ಮಾಸ್ಕ್‍ನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಬಳಸಬೇಕು. ಸಾಮಾನ್ಯ ಜನರು ಸಾಮಾನ್ಯವಾಗಿರುವ ಮಾಸ್ಕ್ ಬಳಸಲು ಸಲಹೆ ನೀಡಿದರು. ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಂಡು ರೋಗ ನಿಯಂತ್ರಿಸಿ ಎಂದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾತನಾಡಿ, ಕೋವಿಡ್-19 ನಿಯಂತ್ರಣ ಮತ್ತು ತಡೆಗಟ್ಟುವ ಸಲುವಾಗಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯು ಉತ್ತಮವಾಗಿ ಕಾರ್ಯನಿರ್ವಹಿತ್ತಿದ್ದು ಜಿಲ್ಲಾಡಳಿತದ ಬೆಂಬಲ ಯಾವಾಗಲೂ ಇದೆ ಎಂದು ಜಿಲ್ಲಾಧಿಕಾರಿಯವರಿಗೆ ಅಭಿನಂದನೆ ಸಲ್ಲಿಸಿದರು. ಭಾರತದಲ್ಲಿ 4966 ಕೊರೊನಾ ಸೋಂಕಿತ ಪ್ರಕರಣಗಳಿದ್ದು ಈ ಪೈಕಿ 129 ಜನ ಮರಣ ಹೊಂದಿದ್ದಾರೆ. 376 ಜನ ಗುಣಮುಖರಾಗಿದ್ದಾರೆ. ಕೊರೊನಾ ವೈರಸ್ ಕಣ್ಣಿಗೆ ಕಾಣದೆ ಇರುವ ಒಂದು ವೈರಸ್ ಆಗಿದ್ದು, ಈ ಪ್ರಜಾತಿಯ ವೈರಸ್ ಭೂಮಿ ಮೇಲೆ ಮಾನವನಿಗೆ 7 ಸಲ ತೊಂದರೆ ಉಂಟು ಮಾಡಿದೆ. 2002 ಮತ್ತು 2003 ರಲ್ಲಿ ಮೊಟ್ಟಮೊದಲು ಸಾರ್ಸ್ ಸೋಂಕು ಚೀನಾ, ಪಾಕ್ ಮುಂತಾದ ದೇಶಗಳಲ್ಲಿ ಕಂಡುಬಂದಿತ್ತು. ಪ್ರಾಣಿಗಳಿಗೆ ಬರುವ ವೈರಸ್ ಇದಾಗಿದ್ದು, ಪ್ರಾಣಿಗಳನ್ನು ಸರಿಯಾಗಿ ಪರಿಷ್ಕರಿಸಿ, ಬೇಯಿಸದೆ ತಿನ್ನುವುದರಿಂದ ಈ ವೈರಸ್‍ನಿಂದ ಮನಷ್ಯನಲ್ಲಿ ಸೋಂಕು ಕಂಡುಬಂದಿತ್ತೆಂದು ಈ ವೈರಸ್‍ನ ಇತಿಹಾಸ ತಿಳಿಸಿದರು. ಸೌದಿ ಅರೇಬಿಯಾದಲ್ಲಿ ಒಂಟೆಗಳಿಂದ 2012 ರಲ್ಲಿ 26 ದೇಶಗಳಿಗೆ ಈ ವೈರಸ್ ಬಂದಿತ್ತು . 2019 ರಲ್ಲಿ ನೊವೆಲ್ ಕೊರೊನಾ ವೈರಸ್ ಆಗಿದೆ ಎಂದರು. ಕೆಮ್ಮು, ಶೀತ, ಜ್ವರ, ಸುಸ್ತು, ಉಸಿರಾಟದ ತೊಂದರೆ, ಇವು ರೋಗಿಯ ಪ್ರಮುಖ ಲಕ್ಷಣಗಳಾಗಿದ್ದು, ಸೋಂಕಿತರನ್ನು ಅಸ್ಪøಶ್ಯರಂತೆ ಕಾಣಬೇಡಿ. ಅವರು ನಮ್ಮಂತೆ ಮನುಷ್ಯರೂ ಎಂದ ಅವರು ಕೊರೊನಾ ವೈರಸ್‍ನ ಸೋಂಕಿಗೆ ಔಷಧಿಗಳನ್ನು ಕಂಡುಹಿಡಿಯಲು ವಿಜ್ಞಾನಿಗಳು ಪ್ರಯೋಗ ನಡೆಸುತ್ತಿದ್ದಾರೆ ಎಂದರು. ದಾವಣಗೆರೆ ಜಿಲ್ಲೆಯಲ್ಲಿ 65 ಜನರನ್ನು ಪರಿಕ್ಷೆಗೆ ಒಳಪಡಿಸಲಾಗಿದ್ದು 3 ಜನರಿಗೆ ಮಾತ್ರ ಪಾಸಿಟಿವ್ ಬಂದಿದ್ದು ಅದರಲ್ಲಿ ಇಬ್ಬರು ಗುಣಮುಖರಾಗಿದ್ದಾರೆ. ಇನ್ನೊಬ್ಬರೂ ಗುಣಮುಖರಾಗುತ್ತಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸೋಂಕು ಮೊದಲ ಹಂತದಲ್ಲಿದ್ದು, ಜಾಗೃತಿ ವಹಿಸಬೇಕು. ಲಾಕ್‍ಡೌನ್ ಮುಗಿಯುವವರೆಗೆ ಸ್ವಯಂ ಸೇವಕರ ಸಹಕಾರ ಬಹುಮುಖ್ಯ ಎಂದರು. ಸಭೆಯಲ್ಲಿ ಡಿ.ಎಲ್.ಓ. ಡಾ ಮುರಳಿಧರ, ಡಾ.ಗಂಗಾಧರ್, ಕೆ.ಐ.ಎ.ಡಿ.ಬಿ.ಯ ಅಧಿಕಾರಿ ಸರೋಜ, ಕುಟುಂಬ ಕಲ್ಯಾಣಾಧಿಕಾರಿ ರೇಣುಕಾರಾದ್ಯ, ವಿಷೇಶ ಭೂಸ್ವಾಧಿನಾಧಿಕಾರಿ ರೇಶ್ಮಾ ಹಾನಗಲ್ ಮತ್ತು ಡಿಐಪಿಆರ್ ಸ್ವಯಂ ಸೇವಕರು, ರೆಡ್‍ಕ್ರಾಸ್, ಲಾ ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳ ಸ್ವಯಂ ಸೇವಕರು ಉಪಸ್ಥಿತರಿದ್ದರು.

TrueMedia

YouTube and Website Channel

You may also like...