ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ತೆರೆದು ಕಾರ್ಯ ನಿರ್ವಹಿಸಬೇಕು: ಜಿಲ್ಲಾಡಳಿತದಿಂದ ಸಿಬ್ಬಂದಿಗಳಿಗೆ ಅಗತ್ಯ ಸಹಕಾರ

ದಾವಣಗೆರೆ ಏ.09-ಸರ್ಕಾರ ಕೋವಿಡ್-19 ಪ್ರಕರಣಗಳ ಪತ್ತೆಗಾಗಿ ಹೆಚ್ಚಿನ ಪರೀಕ್ಷೆಗಳನ್ನು ಮಾಡಿಸಬೇಕೆಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ತೆರೆದು ತಮ್ಮಲ್ಲಿಗೆ ಬರುವ ಶೀತ, ಕೆಮ್ಮು, ಜ್ವರದಂತಹ ಪ್ರಕರಣಗಳನ್ನು ಜಿಲ್ಲಾಸ್ಪತ್ರೆಗೆ ಉಲ್ಲೇಖಿಸುವ ಮೂಲಕ ಕೋವಿಡ್ ಪರೀಕ್ಷೆ ಹೆಚ್ಚಿಸುವಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಇಂದು ಜಿಲ್ಲಾಡಳಿತ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಮತ್ತು ಐಎಂಎ ಪದಾಧಿಕಾರಿಗಳೊಂದಿಗೆ ನಡೆಸಲಾಗದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿನ್ನೆ ಮಾನ್ಯ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್‍ನಲ್ಲಿ ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆಗಳು ಕಡಿಮೆ ವರದಿಯಾಗುತ್ತಿವೆ. ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಕೋವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ತೆರೆದು ಸಕ್ರಿಯರಾಗಿ ಕೆಲಸ ಮಾಡಿದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿ ಕೋವಿಡ್-19 ಪರೀಕ್ಷೆ ನಡೆಸಲು ಸಹಕಾರಿಯಾಗುತ್ತದೆ. ಹೀಗೆ ಖಾಸಗಿ ಸೇರಿದಂತೆ ಎಲ್ಲ ಆಸ್ಪತ್ರೆಗಳು ಸಕ್ರಿಯವಾಗಿ ಕೆಲಸ ಮಾಡಲು ಅಗತ್ಯವಿರುವ ಎಲ್ಲ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು. ಹೊರರೋಗಿಗಳ ಸಂಖ್ಯೆ, ಇನ್‍ಫ್ಲುಯೆಂಜಾ ಮತ್ತು ಗಂಭೀರ ಉಸಿರಾಟದ ಸಮಸ್ಯೆಗಳ ಪ್ರಕರಣಗಳು ಕಡಿಮೆ ಆಗಿವೆ. ಇದಕ್ಕೆ ಕಾರಣ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವುದಾಗಿದೆ. ಆದ್ದರಿಂದ ಆಸ್ಪತ್ರೆಗಳನ್ನು ತೆರೆದು ಸಕ್ರಿಯವಾಗಿ ಕೆಲಸ ಮಾಡಲು ವೈದ್ಯರು ತೊಂದರೆಗಳೇನಾದರೂ ಇದ್ದರೆ ಚರ್ಚಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಗುಲ್ಬರ್ಗದಲ್ಲಿ ನಿನ್ನೆ ಗಂಭೀರ ಉಸಿರಾಟದ ಪ್ರಕರಣವೊಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಆ ವ್ಯಕ್ತಿ ಮರಣ ಹೊಂದಿದ್ದು, ಅವರಿಗೆ ಕೋವಿಡ್ 19 ಇರುವುದು ದೃಢಪಟ್ಟಿದೆ. ಖಾಸಗಿ ನರ್ಸಿಂಗ್ ಹೋಂನವರ ನಿರ್ಲಕ್ಷ್ಯ ಅಥವಾ ಸತ್ಯ ಮುಚ್ಚಿಟ್ಟ ಕಾರಣದಿಂದ ಈ ಸಾವು ಸಂಭವಿಸಿದೆ. ಆದ್ದರಿಂದ ಖಾಸಗಿ ಆಸ್ಪತ್ರೆಗಳು ಈ ಬಗ್ಗೆ ಎಚ್ಚರಿಕೆಯಿಂದ ಇದ್ದು, ಯಾವುದೇ ಜ್ವರ, ಕೆಮ್ಮು ಶೀತ ಪ್ರಕರಣಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಬೇಕೆಂದ ಅವರು ಕೊರೊನಾ ಪÁಸಿಟಿವ್ ಪ್ರಕರಣಗಳು ವರದಿಯಾದರೂ ಪರವಾಗಿಲ್ಲ. ಆದರೆ ಸಾವು ಸಂಭವಿಸದಂತೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದರು. ಟೆಲಿಮೆಡಿಸಿನ್ ಮೂಲಕ ಚಿಕಿತ್ಸೆ ಚುರುಕುಗೊಳಿಸಬೇಕು. ಚೆಕ್‍ಪೋಸ್ಟ್‍ಗಳಲ್ಲಿ ಅನ್ಯ ತಾಲ್ಲೂಕುಗಳಿಂದ ಬರುವವರನ್ನು ಪರೀಕ್ಷಿಸಲು ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಇಲ್ಲ. ಹಳ್ಳಿಗಳಿಂದ ಮೆಡಿಕಲ್ ಶಾಪ್‍ಗೆಂದು ಹಲವು ಜನರು ಬರುತ್ತಿದ್ದು, ಚೆಕ್‍ಪೋಸ್ಟ್‍ನಲ್ಲಿ ಅವರನ್ನು ನಿರ್ವಹಿಸುವುದು ಕಷ್ಟವಾಗುತ್ತಿರುವ ಹಿನ್ನೆಲೆ ವೈದ್ಯರು ಅವರಿಗೆ ಎಸ್‍ಎಂಎಸ್ ಹಾಕುವ ವ್ಯವಸ್ಥೆ ಮಾಡಬೇಕು. ಆ ಎಸ್‍ಎಂಎಸ್ ನೋಡಿ ಬಿಡಲು ಅನುಕೂಲವಾಗುತ್ತದೆ ಎಂದರು. ಖಾಸಗಿ ಆಸ್ಪತ್ರೆಗಳಲ್ಲೂ ಓಪಿಡಿ ಸಂಖ್ಯೆ ಹೆಚ್ಚಬೇಕು. ಸರ್ಕಾರಿ ಆಸ್ಪತ್ರೆಯಂತೆ, ಖಾಸಗಿ ಆಸ್ಪತ್ರೆಗಳ ಜವಾಬ್ದಾರಿಯೂ ಅಷ್ಟೇ ಮುಖ್ಯವಾಗಿದೆ. ಖಾಸಗಿ ಆಸ್ಪತ್ರೆಗಳು ಸಮರ್ಪಕ ಸೇವೆ ನೀಡದಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಕ್ರಮ ಜರುಗಿಸಬಹುದು ಎಂದ ಅವರು ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ಪ್ರತಿದಿನ ಬಿಡುಗಡೆಯಾಗುವ ಮಾರ್ಗಸೂಚಿಗಳನ್ನು ನೋಡಿಕೊಂಡು ಚಿಕಿತ್ಸೆ ನೀಡಬೇಕು. ಡಿಹೆಚ್‍ಓ ರವರು ಪ್ರತಿದಿನ ನಿಮಗೆ ಅದನ್ನು ಅಪ್‍ಡೇಟ್ ಮಾಡಲಿದ್ದಾರೆ ಎಂದರು. ಐಎಂಎ ಕಾರ್ಯದರ್ಶಿ ಪ್ರಸನ್ನ ಮಾತನಾಡಿ ಸಾರಿಗೆ ಸಮಸ್ಯೆಯಿಂದ ಹಳ್ಳಿಗಳಿಂದ ಆಸ್ಪತ್ರೆಗಳಿಗೆ ಜನರು ಬರುತ್ತಿಲ್ಲ. ವಾಹನ ವ್ಯವಸ್ಥೆ ಮಾಡಿದರೂ ಕೆಲವು ಸಿಬ್ಬಂದಿಗಳು ಕೂಡ ಕರ್ತವ್ಯಕ್ಕೆ ಬರುತ್ತಿಲ್ಲವೆಂದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಎಲ್ಲ ಖಾಸಗಿ ಆಸ್ಪತ್ರೆಗಳ ಮೆಡಿಕಲ್, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಧೈರ್ಯದಿಂದ ಕೆಲಸಕ್ಕೆ ಹಾಜರಾಗಬೇಕು, ಎಲ್ಲ ರೀತಿಯ ಸುಭದ್ರತಾ ವ್ಯವಸ್ಥೆಯನ್ನು ನಮ್ಮ ವತಿಯಿಂದ ಮಾಡಲಾಗುವುದು ಎಂದರು.

ಶುಶ್ರೂಷಕರು, ಲ್ಯಾಬ್‍ಟೆಕ್ನೀಷಿಯನ್ ಸೇರಿದಂತೆ ಮಡಿಕಲ್, ಪ್ಯಾರಾಮೆಡಿಕಲ್ ಸಿಬ್ಬಂದಿಗಳು ತಮ್ಮ ದೈನಂದಿನ ಕರ್ತವ್ಯಕ್ಕೆ ಕೊರೊನಾ ಸೋಂಕು ತಗುಲಬಹುದೆಂದು ಅಥವಾ ಇನ್ನಿತರೆ ಕಾರಣಗಳಿಗೆ ತಮ್ಮ ಆಸ್ಪತ್ರೆ ಮತ್ತು ಸಂಸ್ಥೆಗಳಿಗೆ ತೆರಳದೇ ಮನೆಯಲ್ಲೇ ಉಳಿದರೆ ಅಂತಹ ಶುಶ್ರೂಷಕರು ಮತ್ತು ಲ್ಯಾಬ್ ಟೆಕ್ನೀಷಿಯನ್, ಪ್ಯಾರಾ ಮೆಡಿಕಲ್ ಸಿಬ್ಬಂದಿ ಅಧ್ಯಯನ ಪ್ರಮಾಣ ಪತ್ರ ರದ್ದುಪಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಅದಕ್ಕೆ ಅವಕಾಶ ಮಾಡಿಕೊಡದೇ ಸಿಬ್ಬಂದಿಗಳು ತಮಗೆ ತಮ್ಮ ಸಂಸ್ಥೆಯಿಂದ ನೀಡಲಾದ ಪಾಸ್‍ಗಳನ್ನು ಬಳಸಿಕೊಂಡು ಕರ್ತವ್ಯಕ್ಕೆ ಹಾಜರಾಗಬೇಕು. ಆರೋಗ್ಯ ಸಿಬ್ಬಂದಿಗೆ ಅವಶ್ಯಕವಾದ ಸುರಕ್ಷತಾ ಕ್ರಮಗಳನ್ನೆಲ್ಲ ಕೈಗೊಳ್ಳಲಾಗುವುದು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಎಸ್‍ಎಸ್ ಆಸ್ಪತ್ರೆಯ ಡಾ.ರವಿ ಮಾತನಾಡಿ, ಕೋವಿಡ್ ಐಸಿಯು ರೂಂನಲ್ಲಿ ಕೆಲಸ ಮಾಡುವ ವೈದ್ಯರಿಗೆ ಕ್ವಾರಂಟೈನ್ ವ್ಯವಸ್ಥೆ ಮತ್ತು ವೈದ್ಯರಿಗೆ ಆರ್ಥಿಕ ಸಹಕಾರ ನೀಡುವಂತೆ ಕೋರಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗರಾಜ್ ಮಾತನಾಡಿ, ನಗರದ ಶಾಮನೂರು ರಸ್ತೆಯಲ್ಲಿರುವ ಎರಡು ಲಾಡ್ಜ್‍ಗಳನ್ನು ವೈದ್ಯರ ಕ್ವಾರೈಂಟೈನ್‍ಗೆ ಗುರುತಿಸಲಾಗಿದೆ ಎಂದರು. ವೈದ್ಯರಿಗೆ ವಿಮೆ ಸೌಲಭ್ಯ ಸರ್ಕಾರ ನೀಡಲಿದ್ದು, ಆರ್ಥಿಕ ಸಹಕಾರದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಡಿಸಿ ತಿಳಿಸಿದರು. ನರ್ಸಿಂಗ್ ಹೋಂಗಳ ಸಂಘದ ಅಧ್ಯಕ್ಷ ಡಾ.ಮಾವಿನತೋಪು ಮಾತನಾಡಿ, ಆಸ್ಪತ್ರೆ ಸಿಬ್ಬಂದಿಗಳು ಓಡಾಡುವ ವಾಹನಕ್ಕೆ ಪೊಲೀಸರು ತೊಂದರೆ ಕೊಡದಂತೆ ವ್ಯವಸ್ಥೆಯಾಗಬೇಕೆಂದು ಮನವಿ ಮಾಡಿದರು. ಎಸ್‍ಎಸ್‍ಐಎಂಎಸ್ ಪ್ರಾಂಶುಪಾಲ ಡಾ.ಪ್ರಸಾದ್ ಮಾತನಾಡಿ, ಪ್ರಸ್ತುತ ಜನರೆಲ್ಲ ಲಾಕ್‍ಡೌನ್ ಆಗಿರುವ ಹಿನ್ನೆಲೆ ಐಎಲ್‍ಐ ಅಂದರೆ ಇನ್‍ಫ್ಲುಯೆಂಜ ಪ್ರಕರಣಗಳು ಕಡಿಮೆ ಇರುತ್ತವೆ. ಆದ್ದರಿಂದ ಹೆಚ್ಚು ಜನಸಂದಣಿ ಇರುವ ಊರು, ಪ್ರದೇಶಗಳಲ್ಲಿ ರ್ಯಾಂಡಮ್ ಆಗಿ ಕೋವಿಡ್ 19 ಪರೀಕ್ಷೆ ನಡೆಸುವಂತೆ ಸಲಹೆ ನೀಡಿದರು. ಡಾ.ಅರುಣ್‍ಕುಮಾರ್ ಮಾತನಾಡಿ, ವೈದ್ಯರ ವಿರುದ್ದ ಹಲ್ಲೆಯಂತಹ ಪ್ರಕರಣಗಳು ಈ ಸಮಯದಲ್ಲಿ ಸಂಭವಿಸಬಹುದಾಗಿದ್ದು ಸರ್ಕಾರ ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡಿದರು. ಐಎಂಎ ಅಧ್ಯಕ್ಷ ರುದ್ರಮುನಿ ಆರ್ಥೋಪೆಡಿಕ್ ಸೇರಿದಂತೆ ಇತರೆ ಸರ್ಜರಿಗೆ ಬರುವ ರೋಗಿಗಳಿಗೆ ಕೋವಿಡ್ ಸ್ಕ್ರೀನಿಂಗ್‍ಗೆ ಅವಕಾಶ ಮಾಡಿಕೊಡುವಂತೆ ಕೋರಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಖಾಸಗಿ ಸೇರಿದಂತೆ ಎಲ್ಲ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗಳ ಭದ್ರತೆಗೆ ಜಿಲ್ಲಾಡಳಿತ ಸದಾ ಸಿದ್ದವಾಗಿದ್ದು, ಖಾಸಗಿ ಆಸ್ಪತ್ರೆಗಳಿಗೆ ಅಗತ್ಯವಿರುವ ಪಿಪಿಇ ಕಿಟ್ಸ್, ಎನ್95 ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು. ಧೈರ್ಯದಿಂದ ಸೇವೆ ಸಲ್ಲಿಸುವಂತೆ ಮನವಿ ಮಾಡಿದರು.

ಕೃತಜ್ಞತೆ : ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ದಕ್ಷವಾಗಿ ಕಾರ್ಯ ನಿರ್ವಹಿಸಿ ಸೋಂಕಿತರನ್ನು ಗುಣಮುಖಪಡಿಸಿದ ಸಿಜಿ ಮತ್ತು ಎಸ್‍ಎಸ್ ಆಸ್ಪತ್ರೆಯ ಎಲ್ಲ ವೈದ್ಯರು/ಸಿಬ್ಬಂದಿಗಳಿಗೆ ತುಂಬು ಹೃದಯದ ಅಭಿನಂದನೆಗಳು.
ಇದರೊಂದಿಗೆ ಎಸ್‍ಎಸ್ ಆಸ್ಪತ್ರೆಯ ಅಧ್ಯಕ್ಷರು ಸರ್ಕಾರ ನೀಡುವ ಸೌಲಭ್ಯದ ಜೊತೆಗೆ ನಮ್ಮ ಎಸ್‍ಎಸ್ ಆಸ್ಪತ್ರೆಯಿಂದ ಎಷ್ಟೇ ಖರ್ಚಾದರೂ ಪರವಾಗಿಲ್ಲ, ವೈದ್ಯರು ಉತ್ತಮ ಚಿಕಿತ್ಸೆ ನೀಡಿ, ನಿಮಗೆ ಎಲ್ಲ ರೀತಿಯ ಪ್ರೋತ್ಸಾಹ ಇದೆ ಎಂದು ತಿಳಿಸಿದ್ದಾರೆ. ಅವರಿಗೂ ನಮ್ಮ ಪರವಾಗಿ ಅಭಿನಂದನೆಗಳು.
ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿಗಳು

ಸಭೆಯಲ್ಲಿ ಕೋವಿಡ್ -19 ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಎಸ್‍ಎಸ್‍ಐಎಂಎಸ್ ವೈದ್ಯಕೀಯ ಅಧೀಕ್ಷಕ ಡಾ.ಕಾಳಪ್ಪನವರ್, ಬಾಪೂಜಿ ಆಸ್ಪತ್ರೆಯ ಡಿ.ಎಸ್.ಕುಮಾರ್, ಡಾ.ಬಾಲು, ಡಾ.ಗೀತಾಲಕ್ಷ್ಮಿ, ಡಾ.ಉಳ್ಳಾಲ, ಡಾ.ವಿನಯ್ ಕುಮಾರ್, ಡಾ.ಸುಬ್ರಾವ್ ಸೇರಿದಂತೆ ವೈದ್ಯರು, ಅಧಿಕಾರಿಗಳು ಹಾಜರಿದ್ದರು.

TrueMedia

YouTube and Website Channel

You may also like...