ದಾವಣಗೆರೆ ಪಾಲಿಕೆ ಮೇಯರ್ ವಿತರಿಸಿರುವ ಪಾಸ್‍ಗಳು ಅಸಿಂಧು : ಜಿಲ್ಲಾಧಿಕಾರಿ

ದಾವಣಗೆರೆ ಏ.08-ಲಾಕ್‍ಡೌನ್ ಹಿನ್ನೆಲೆ ಪಾಲಿಕೆ ಮೇಯರ್‍ರವರು ವಿತರಿಸಿರುವ ಪಾಸ್‍ಗಳು ಅಸಿಂಧುವಾಗಿದ್ದು, ಮೇಯರ್‍ರಿಂದ ಪಡೆದ ಪಾಸ್‍ಗಳನ್ನು ಬಳಕೆ ಮಾಡುವಂತಿಲ್ಲ. ತಕ್ಷಣ ಈ ಪಾಸ್‍ಗಳನ್ನು ವಾಪಸ್ ನೀಡಬೇಕು. ಒಂದು ವೇಳೆ ಬಳಕೆ ಮಾಡಿದಲ್ಲಿ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಮೇಯರ್‍ರವರು ಪಾಸ್ ನೀಡಿರುವ ಬಗ್ಗೆ ತಿಳಿದುಬಂದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳು ಮೇಯರ್‍ರವನ್ನು ಜಿಲ್ಲಾಡಳಿತ ಕಚೇರಿಗೆ ಕರೆಯಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿದಾಗ, ಮೇಯರ್‍ರವರು ಜಿಲ್ಲಾಡಳಿತಕ್ಕೆ ಪಾಸ್ ಕೇಳಿದ್ದೆವು. ಖಾಲಿಯಾಗಿದೆ ಎಂದು ತಿಳಿಸಲಾಗಿ ತಾವೇ ಸ್ವತಃ ಪಾಸ್‍ಗಳನ್ನು ಮುದ್ರಿಸಿ ನೀಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಹಾಗೂ ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ. ಉಳಿದ ಪಾಸ್‍ಗಳನ್ನು ವಾಪಸ್ ನೀಡುತ್ತೇವೆ. ಹಾಗೂ ಇಂತಹ ಘಟನೆ ಮತ್ತೊಮ್ಮೆ ಮರುಕಳಿಸದಂತೆ ನೋಡಿಕೊಳ್ಳುತ್ತೇನೆಂದು ಹೇಳಿದ್ದಾರೆ. ಜಿಲ್ಲಾಧಿಕಾರಿಗಳು, ಮೇಯರ್‍ರವರು ನೀಡಿರುವ ಪಾಸ್‍ಗಳನ್ನು ಸಾರ್ವಜನಿಕರು ಬಳಸುವುದು ಕಂಡುಬಂದಲ್ಲಿ ಅಂತಹವರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಂಡು ಶಿಕ್ಷೆಗೆ ಗುರಿಪಡಿಸಲಾಗುವುದು. ಪಾಸ್ ಪಡೆದವರು ಮರಳಿ ಮೇಯರ್ ಕಚೇರಿಗೆ ಪಾಸ್‍ಗಳನ್ನು ನೀಡಬೇಕು. ಈ ಪಾಸ್ ಬಳಸುವವರು ಕಂಡುಬಂದಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ತಿಳಿಸಲಾಗಿದ್ದು ಅವರು ತಮ್ಮ ಅಧೀನದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಅವಶ್ಯಕ ಸೇವೆಗಳಿಗೆ ಪಾಸ್ ಅವಶ್ಯವಿದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ನೇರವಾಗಿ ಸಂಪರ್ಕಿಸಿ ಪಡೆಯಬೇಕು. ಬೇರೆಯವರಿಂದ ಪಡೆದ ಪಾಸ್‍ಗಳು ಸಿಂಧುವಲ್ಲ ಎಂದು ಸ್ಪಷ್ಟೀಕರಿಸುತ್ತೇನೆಂದು ತಿಳಿಸಿದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಇದ್ದರು.

TrueMedia

YouTube and Website Channel

You may also like...