ವಿಪತ್ತು ನಿರ್ವಹಣಾ ಸಮಿತಿಗಳ ಸಭೆ ಕೊರೋನಾ ಮುಕ್ತವಾಗುವವರೆಗೆ ರಜೆ ಇಲ್ಲ

ದಾವಣಗೆರೆ, ಏ.09-ದಾವಣಗೆರೆ ಜಿಲ್ಲಾದ್ಯಂತ ಕೊರೋನಾ ವೈರಾಣು ಮುಕ್ತವಾಗುವವರೆಗೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ರಜೆ ಇಲ್ಲ. ಕೊರೋನ ಮುಕ್ತ ಜಿಲ್ಲೆಯಾಗಿಸಲು ನಾವೆಲ್ಲರೂ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿ ಗುರುವಾರ ಏರ್ಪಡಿಸಲಾದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು. ‘ಚೈತನ್ಯದ ಆಗರ ಸಾಮಥ್ರ್ಯದ ಸಾಗರ’ ಎಂಬಂತೆ ನಾವೆಲ್ಲರೂ ನಮ್ಮ ನಮ್ಮ ಜವಾಬ್ದಾರಿಯನ್ನು ಅರಿತು ಪೂರ್ಣ ಪ್ರಮಾಣದಲ್ಲಿ ಕರ್ತವ್ಯಗಳನ್ನು ನಿರ್ವಹಿಸೋಣ. ಜಿಲ್ಲೆಯಲ್ಲಿ ಈವರೆಗೆ ಉತ್ತಮ ರೀತಿಯಲ್ಲಿ ನಿವೆಲ್ಲರೂ ಕಾರ್ಯ ನಿರ್ವಹಿಸಿದ್ದೀರಿ ತಮಗೆಲ್ಲ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ವಿಪತ್ತು ನಿರ್ವಹಣೆಗಾಗಿ ಜಿಲ್ಲೆಯಲ್ಲಿ ಒಟ್ಟು 19 ವಿವಿಧ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಪ್ರತಿದಿನ ಕಾರ್ಯನಿರ್ವಹಿಸಿ, ವರದಿಯನ್ನು ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದರು. ನಗರ ಪ್ರದೇಶದಲ್ಲಿರುವ ವಲಸಿಗರಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ತಪಾಸಣೆ ನಡೆಯುವಂತೆ ಕ್ರಮ ವಹಿಸಿ. ನಿರ್ಗತಿಕರಿಗೆ ಹಾಗೂ ನಿರಾಶ್ರಿತರಿಗೆ ಅಗತ್ಯನುಸಾರ ಆಹಾರ ಸಾಮಗ್ರಿಗಳನ್ನು ಪೂರೈಸಿರಿ. ಸಮುದಾಯ ಭವನದಲ್ಲಿರುವ ವಲಸೆ ಕಾರ್ಮಿಕರು, ನಿರಾಶ್ರಿತರಿಗೆ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಯುತ್ತಿರುವ ಬಗ್ಗೆ ನಿಗಾವಹಿಸಬೇಕು ಎಂದರು ಸಾರ್ವಜನಿಕರು ಅವಶ್ಯಕ ಸೇವೆಗಳಿಗೆ ಪಾಸ್ ಅವಶ್ಯವಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಡೆಯಬೇಕು. ಬೇರೆಯವರಿಂದ ಪಡೆದ ಪಾಸ್‍ಗಳು ಸಿಂಧುವಲ್ಲ ಎಂದು ಸ್ಪಷ್ಟೀಕರಿಸುತ್ತೇನೆ. ಸಿಂಧುವಲ್ಲದ ಪಾಸ್‍ಗಳನ್ನು ಬಳಸಿದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸ್ಥಳೀಯ ಶಾಸಕರ ಅನುದಾನದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಲು 10 ರಿಂದ 15 ಲಕ್ಷ ರೂ.ಗಳ ಅನುದಾನವನ್ನು ಶಾಸಕರ ಒಪ್ಪಿಗೆ ಪಡೆದು. ಆಯಾ ತಾಲ್ಲೂಕುಗಳ ತಹಶೀಲ್ದಾರರು ಕ್ರಮ ವಹಿಸಲು ತಿಳಿಸಿದರು. ಈ ಅನುದಾನದಲ್ಲಿ ಸ್ಪ್ರೇಯರ್ ಖರೀದಿಸಿ ಬಳಕೆ ಮಾಡಬಹುದಾಗಿದೆ ಎಂದರು. 10 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯತ್‍ಗಳನ್ನು ಗುರುತಿಸಿ ಅಲ್ಲಿ ರೋಗ ನಿಯಂತ್ರಕ ಔಷದಿ ಸಿಂಪಡಣೆ ಮಾಡಲು ಕ್ರಮ ಅಗತ್ಯ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಹೇಳಿದರು. ಆಹಾರ ಇಲಾಖೆ ಉಪನಿರ್ದೇಶಕ ಮಂಟೆಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 3.79 ಲಕ್ಷ ಪಡಿತರ ಕಾರ್ಡುಗಳಿದ್ದು, ಇದರಲ್ಲಿ 2.20 ಲಕ್ಷ ಪಡಿತರ ಕಾರ್ಡುಗಳಿಗೆ ಈಗಾಗಲೇ ಪಡಿತರವನ್ನು ವಿತರಣೆ ಮಾಡಲಾಗಿದೆ. ಉಳಿದ ಪಡಿತರಿಗೆ 2 ದಿನಗಳಲ್ಲಿ ಪೂರೈಕೆ ಮಾಡಲಾಗುವುದು ಎಂದರು. ಜಿಲ್ಲಾದ್ಯಂತ ಪಡಿತರ ವಿತರಣೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು. ಪಡಿತರ ವಿತರಣೆಯಲ್ಲಿ ಹಣ ವಸೂಲಾತಿ ನಡೆಯುತ್ತಿದೆ ಎಂದು ದೂರುಗಳು ಬರುತ್ತಿದ್ದು, ಇದನ್ನು ಆಹಾರ ಇಲಾಖೆ ಅಧಿಕಾರಿಗಳು ಖುದ್ದಾಗಿ ಬೇಟಿ ನೀಡಿ ಪರಿಶೀಲಿಸಿ ಶಿಸ್ತು ಕ್ರಮ ಜರುಗಿಸಲು ಸೂಚನೆ ನೀಡಿದರು. ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ 19 ತಂಡಗಳನ್ನು ರಚಿಸಿದೆ. ಅಂಬುಲೆನ್ಸ್ ಸಂಚಾರ ನಿರ್ವಹಣೆ ತಂಡ, ಜ್ವರ ಕ್ಲಿನಿಕ್ ತಂಡ, ತುರ್ತು ಸಂದರ್ಭ ಯೋಜನೆ ನಿರ್ವಹಣೆ ತಂಡ, ಪ್ರಯೋಗಾಲಯ ಸಮಿತಿ, ಸಂಪರ್ಕ ಪತ್ಯೆ ತಂಡ, ಕ್ವಾರೈಂಟಿನ್ ನಿರ್ವಹಣಾ ತಂಡ, ಅವಶ್ಯಕ ಸಾಮಗ್ರಿ ಪೂರೈಕೆ ತಂಡ, ಬಯೋ ಮೆಡಿಕಲ್ ನಿರ್ವಹಣಾ ಹಾಗೂ ಮೃತ ದೇಹ ನಿರ್ವಹಣಾ ತಂಡ, ಕೋವಿಡ್ ಆಸ್ಪತ್ರೆಗಳ ನಿರ್ವಹಣೆ ತಂಡ, ಚೆಕ್‍ಪೋಸ್ಟ ನಿರ್ವಹಣಾ ತಂಡ ಸೇರಿದಂತೆ ಮತ್ತಿತರ ತಂಡ ರಚಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು. ಪ್ರತಿ ತಂಡಗಳಿಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಆಯಾ ತಂಡಗಳ ಕಾರ್ಯನಿರ್ವಹಣೆ ಕುರಿತು ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪದ್ಮ ಬಸವಂತಪ್ಪ, ಎಸಿ ಮಮತಾ ಹೊಸಗೌಡರ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಪಂ ಉಪಕಾರ್ಯದರ್ಶಿ ಆನಂದ, ಸ್ಮಾರ್ಟ್‍ಸಿಟಿ ಎಂಡಿ ರವಿಂದ್ರ ಮಲ್ಲಾಪುರ, ಕೆಐಡಿಬಿಎ ಅಧಿಕಾರಿ ಸರೋಜಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ, ವಿಶೇಷ ಭೂಸ್ವಾಧಿನಾಧಿಕಾರಿ ರೇಶ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

TrueMedia

YouTube and Website Channel

You may also like...